ಸ್ಥಾಯೀ ಆದೇಶಗಳ ಕಾಯಿದೆ (Standing Orders Act)

₹290/-
Street Address #326, 1st Floor, Opp. Syndicate Bank, Near Dr. AIT College, Kengunte, Mallathahalli
City Bangalore
ZIP/Postal Code 560056
State Karnataka
Country India
126 Views

ಸ್ಥಾಯೀ ಆದೇಶಗಳ ಕಾಯಿದೆ

ಲೇಖಕರು : ಎಂ ಆರ್ ನಟರಾಜ್ 

 

ಸ್ವಾತಂತ್ರ್ಯ ಪೂರ್ವ ಭಾರತದ ಕಾಲಕ್ಕೆ ಸೇರಿದ ಔದ್ಯೋಗಿಕ ಕಾಯಿದೆಗಳಲ್ಲಿ ಸ್ಥಾಯೀ ಆದೇಶಗಳ ಕಾಯಿದೆಯು ಬಹಳ ಪ್ರಮುಖವಾದದ್ದು.  ಈ ಕಾಯಿದೆ ಜಾರಿಗೆ ಬಂದು ಸುಮಾರು ಎಪ್ಪತ್ತು ವರ್ಷಗಳಾಗಿದ್ದರೂ ಔದ್ಯೋಗಿಕ ಕರಾರುಗಳನ್ನು ನಿರ್ದೇಶಿಸುವಲ್ಲಿ ಈ ಕಾಯಿದೆಯ ಮಹತ್ವ  ಯಾವುದೇ ರೀತಿಯಲ್ಲಿಯೂ ಕಡಿಮೆಯಾಗಿಲ್ಲ. ನಿರ್ದಿಷ್ಟ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಪ್ರತಿಯೊಂದು ಸಂಸ್ಥೆಯೂ ಇಂದು ಈ ಕಾನೂನನ್ನು ಆಧರಿಸಿರುವ ಸ್ಥಾಯೀ ಆದೇಶಗಳ ಮೇಲೆಯೇ ನಿಂತಿರುವುದು. ಇಂದು ಕೈಗಾರಿಕಾ ಸಂಸ್ಥೆಗಳಲ್ಲಿ ಶಿಸ್ತು, ನಿಯಮ ಅಥವಾ ಒಂದು ಆಡಳಿತಾತ್ಮಕ ಸ್ಥಿರತೆ ಇದೆ ಎನ್ನುವುದಾದರೆ ಅದು ಸ್ಥಾಯೀ ಆದೇಶಗಳ ಕಾರಣದಿಂದ.

ಸ್ಥಾಯೀ ಆದೇಶಗಳ ಮತ್ತೊಂದು ವೈಶಿಷ್ಟ್ಯತೆ ಏನೆಂದರೆ ಅದು ಉದ್ಯೋಗದಾತರಿಗೆ ಎಷ್ಟು ಪ್ರಮುಖವಾಗಿದೆಯೋ ಉದ್ಯೋಗಿಗಳಿಗೂ ಅದು ಅಷ್ಟೇ ಪ್ರಾಮುಖ್ಯವಾಗಿದೆ. ಈ ಆದೇಶಗಳಲ್ಲಿನ ಔದ್ಯೋಗಿಕ ಕರಾರುಗಳು ಉದ್ಯೋಗದಾತರಿಗೆ ಮತ್ತು ಉದ್ಯೋಗಿಗಳಿಗೆ ಒಂದೇ ತೆರನಾದ ಭದ್ರತೆ ಒದಗಿಸಿದೆ.
 
ಸಂಸ್ಥೆಯಲ್ಲಿ ಶಿಸ್ತನ್ನು ಕಾಪಾಡಿಕೊಳ್ಳಲು, ಉತ್ಪಾದನಾ ಪ್ರಕ್ರಿಯೆಯನ್ನು ನಿರ್ದೇಶಿಸಲು, ಒಬ್ಬ ಉದ್ಯೋಗಿ ಸಂಸ್ಥೆಯಲ್ಲಿ ಏನು ಮಾಡಬೇಕು ಅಥವಾ ಏನು ಮಾಡಬಾರದು  ಎನ್ನುವದನ್ನಷ್ಟೇ ಸ್ಥಾಯೀ ಆದೇಶಗಳು ತಿಳಿಸುವುದಿಲ್ಲ. ಅದರ ಜೊತೆಗೆ ಕೆಲವೊಂದು ಉದ್ಯೋಗದಾತರ ಅನೀತಿಯುತ ನಡವಳಿಕೆ, ಅನ್ಯಾಯಯುತ ನಿರ್ಧಾರಗಳಿಗೆ ತಡೆಯೊಡ್ಡುವುದಲ್ಲದೇ ಉದ್ಯೋಗಿಯೊಬ್ಬನಿಗೆ ಅವಶ್ಯವಾಗಿರುವ ಉದ್ಯೋಗ ಭದ್ರತೆಯನ್ನು ಕೂಡಾ ಒದಗಿಸುತ್ತದೆ. ಈ ಕಾರಣಗಳಿಂದಾಗಿಯೇ ಇಷ್ಟು ವರ್ಷಗಳು ಕಳೆದ ನಂತರವೂ  ಈ ಸ್ಥಾಯೀ ಆದೇಶಗಳ ಕಾಯಿದೆ ತನ್ನದೇ ಆದ ಜೀವಂತಿಕೆ ಉಳಿಸಿಕೊಂಡಿರುವುದು.
 
ಭಾರತದಲ್ಲಿನ ಔದ್ಯೋಗಿಕ ಕಾಯಿದೆಗಳು ಸ್ವತಂತ್ರಪೂರ್ವದಲ್ಲಿದ್ದ ರಾಜಕೀಯ ಮತ್ತು ಆರ್ಥಿಕ ಆಲೋಚನೆಗಳನ್ನು ಹೊರಹಾಕುತ್ತವೆ. ಆನಂತರ ಭಾರತದ ಸಂವಿಧಾನ, ಭಾರತದ ಸಂಸತ್ತು, ರಾಜ್ಯಗಳ ವಿಧಾನ ಮಂಡಲಗಳು, ಅಂತರ್ ರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ (ಐ.ಎಲ್.ಒ)  ಶಿಫಾರಸುಗಳು, ಕಾರ್ಮಿಕ ಸಂಘಗಳ ಹೋರಾಟ, ಮಾನವ ಹಕ್ಕುಗಳು ಮತ್ತು ಔದ್ಯೋಗಿಕ ಸುರಕ್ಷತೆಯ ಬಗ್ಗೆ ಹೆಚ್ಚಿದ ಜಾಗೃತಿ, ಬದಲಾದ ರಾಜಕೀಯ, ಸಾಮಾಜಿಕ ಮತ್ತು ಅರ್ಥಿಕ ಪರಿಸ್ಥಿತಿಗಳು, ಉದ್ಯೋಗಿಗಳ ಭವಿಷ್ಯನಿಧಿ, ಕಾರ್ಮಿಕರ ರಾಜ್ಯ ವಿಮಾ ಕಾಯಿದೆ ಇವೇ ಮೊದಲಾದ ಸಾಮಾಜಿಕಾ ಸುರಕ್ಷಾ ಯೋಜನೆಗಳು, ಕೆಲಸದ ಹಕ್ಕುಗಳು, ತಾರತಮ್ಯತೆಯ ಬಗೆಗಿನ ವಿರೋಧ, ವೇತನ ಭದ್ರತೆ, ಬಾಲ ಕಾರ್ಮಿಕರ ನಿಷೇಧ , ನ್ಯಾಯಾಲಯಗಳ ಮಹತ್ವಪೂರ್ಣ ತೀರ್ಪುಗಳು ಭಾರತದ ಔದ್ಯೋಗಿಕ ಕಾಯಿದೆ ಮತ್ತು ನಿಯಮಗಳಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಿವೆ.
 
ಬೇರೆ ದೇಶಗಳಿಗೆ ಹೋಲಿಸಿದರೆ ಭಾರತದಲ್ಲಿನ  ಔದ್ಯೋಗಿಕ ಕಾಯಿದೆಗಳು ಬಹಳ ಬಿಗುವು ಮತ್ತು ಪ್ರತಿಬಂಧಕತೆಯಿಂದ ಕೂಡಿವೆ ಎಂದು ಹೇಳಬಹುದು. ಭಾರತದಲ್ಲಿ ಲಭ್ಯವಿದ್ದ ಹೇರಳ ಮಾನವ ಸಂಪನ್ಮೂಲ ಮತ್ತು ಅವುಗಳ ಶೋಷಣೆಯು ಕೂಡಾ ಗರಿಷ್ಠ ಪ್ರಮಾಣದಲ್ಲಿ ಇದ್ದುದರಿಂದ ಸರಕಾರ ಮತ್ತು ಕಾರ್ಮಿಕ ಸಂಘಗಳು ತಮ್ಮ ಮುಗ್ದ ಕಾರ್ಮಿಕರ ಹಿತಾಸಕ್ತಿಗಾಗಿ ಹೋರಾಡಿ ಅವರ ಹಕ್ಕುಗಳನ್ನು ರಕ್ಷಿಸಲು ಬಿಗಿಯಾದ ಕಾಯಿದೆಗಳನ್ನು ಜಾರಿಗೆ ತರಲು ಒತ್ತಾಯಿಸಬೇಕಾಯಿತು ಎಂಬ ಅಂಶವನ್ನು ಎಲ್ಲರೂ ಗಮನದಲ್ಲಿಟ್ಟುಕೊಳ್ಳಬೇಕು. ಬಿಗಿಯಾದ ಔದ್ಯೋಗಿಕ ಕಾಯಿದೆಗಳು ಕೈಗಾರಿಕಾ ಪ್ರಗತಿಗೆ ಮಾರಕವಾಯಿತು ಎಂಬ ಮಾತು ಒಂದು ವರ್ಗದಲ್ಲಿ ಕೇಳಿಬರುತ್ತದೆಯಾದರೂ ಒಂದು ವೇಳೆ ಈ ರೀತಿಯ ಬಿಗಿಯಾದ ಕಾನೂನುಗಳು ಇಲ್ಲದೇ ಇದ್ದರೆ ಭಾರತದ ಕೈಗಾರಿಕೆಗಳು ಭಾರಿ ಪ್ರಗತಿಯನ್ನು ಸಾಧಿಸುತ್ತಿದ್ದವು ಮತ್ತು ಶೋಷಣೆಮುಕ್ತ ಔದ್ಯೋಗಿಕ ವಲಯವನ್ನು ಸೃಷ್ಟಿಸುತ್ತಿದ್ದವು ಎಂಬುದಕ್ಕೆ ಒಂದಂಶದ ಪುರಾವೆಗಳು ದೊರಕುವುದಿಲ್ಲ. ಖಾಸಗಿ ವಲಯಕ್ಕೆ ಹೋಲಿಸಿದರೆ ಸಾರ್ವಜನಿಕ ವಲಯದಲ್ಲಿರುವ ಕೈಗಾರಿಕಾ ಸಂಸ್ಥೆಗಳಲ್ಲಿ ಕಾರ್ಮಿಕ ಸಂಘಟನೆಗಳ ಚಟುವಟಿಕೆ, ನಿಯಮಾವಳಿಗಳ ಅನುಸರಣೆ, ವೇತನದ ದರ ಇವೆಲ್ಲವೂ ಹೆಚ್ಚು. ಆದರೆ ಇವತ್ತಿಗೂ ಕೂಡಾ ದೇಶದ ಅತ್ಯುತ್ತಮ ಕೈಗಾರಿಕೆಗಳ ಉಲ್ಲೇಖ ಮಾಡುವಾಗ ನಮ್ಮ ಮುಂದೆ ಬರುವುದು ಮಹಾರತ್ನ ಸಂಸ್ಥೆಗಳಾದ ಬಿ.ಎಚ್.ಇ.ಎಲ್, ಕೋಲ್ ಇಂಡಿಯಾ ಲಿಮಿಟೆಡ್, ಇಂಡಿಯನ್ ಆಯಿಲ್ ಕಾರ್ಪೋರೇಷನ್, ಎನ್.ಟಿ.ಪಿ.ಸಿ, ಓ.ಎನ್.ಜಿ.ಸಿ, ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ, ಜಿ.ಎ.ಐ.ಎಲ್ (ಇಂಡಿಯಾ) ಲಿಮಿಟೆಡ್ ಅಥವಾ ನವರತ್ನ ಸಂಸ್ಥೆಗಳಾದ ಬಿ.ಎ.ಎಲ್, ಬಿ.ಇ.ಎಂ.ಎಲ್, ಬಿ.ಎಸ್.ಎನ್.ಎಲ್ ಮುಂತಾದ ಸಂಸ್ಥೆಗಳೇ. ಅಧಿಕಾರಶಾಹಿಯು ಆಡಳಿತ ನಿರ್ವಹಣೆಯಲ್ಲಿ ಲೋಪಗಳನ್ನು ಮಾಡದೇ ಇದ್ದಿದ್ದರೆ ಬಹಳಷ್ಟು ಪ್ರಖ್ಯಾತವಾಗಿದ್ದ ಹಲವಾರು ಸಾರ್ವಜನಿಕ ವಲಯದ ಕೈಗಾರಿಕೆಗಳು ಇನ್ನೂ ಜೀವಂತವಾಗಿರುತಿದ್ದವು.

ಈಗಾಗಲೇ ತಿಳಿಸಿದಂತೆ ಸ್ಥಾಯೀ ಆದೇಶಗಳ ಕಾಯಿದೆ ಸ್ವತಂತ್ರಪೂರ್ವದ ಕಾಲಕ್ಕೆ ಸೇರಿದ ಕಾಯಿದೆ. ಆ ಕಾಲದಲ್ಲಿ ಮಾಡಿದ ಈ ಕಾಯಿದೆಯು ಸದೃಢವಾಗಿವೆ ಮತ್ತು ಸರಿಯಾಗಿ ಬಳಕೆಯಾದಲ್ಲಿ ಸಂಬಂಧಗಳನ್ನು ವೃದ್ದಿಸುವಲ್ಲಿ ಬಹಳ ಸಹಕಾರಿಯಾಗಿವೆ.  ೧೯೨೩ ರ ಕಾರ್ಮಿಕರ ಪರಿಹಾರ ಕಾಯಿದೆ, ೧೯೨೬ ರ ಕಾರ್ಮಿಕ ಸಂಘಗಳ ಕಾಯಿದೆ, ೧೯೩೬ ರ ವೇತನ ಸಂದಾಯ ಕಾಯಿದೆ, ಸ್ಥಾಯೀ ಆದೇಶಗಳ ಕಾಯಿದೆ, ೧೯೪೬ ಇವೆಲ್ಲಾ ಸತ್ವವಿರುವ ಕಾಯಿದೆಗಳೇ.  ಸ್ವಾತಂತ್ರ್ಯಾನಂತರ ಜಾರಿಗೆ ಬಂದ ಔದ್ಯೋಗಿಕ ಕಾಯಿದೆಗಳಿಗೆ ಹೋಲಿಸಿದರೆ ಈ ಕಾಯಿದೆಗಳನ್ನಿನ ತಿದ್ದುಪಡಿಗಳು ವಿರಳ.  ಈ ಒಂದು ಅಂಶ ಈ ಕಾಯಿದೆಗಳ ಮಹತ್ವ , ಪ್ರಭಾವ ಮತ್ತು ಗಟ್ಟಿತನವನ್ನು ತೋರಿಸುತ್ತದೆ.
 
ಪ್ರಸಕ್ತ ಈ ಸ್ಥಾಯೀ ಆದೇಶಗಳ ಕಾಯಿದೆ ನೂರು ಮತ್ತು ಅದಕ್ಕಿಂತಲೂ ಹೆಚ್ಚಿನ ಉದ್ಯೋಗಿಗಳಿರುವ ಕೈಗಾರಿಕಾ ಸಂಸ್ಥೆಗಳಿಗೆ ಅನ್ವಯಿಸುತ್ತದೆ. ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳಲ್ಲಿ ಉದ್ಯೋಗಿಗಳ ಸಂಖ್ಯೆಯ ಅನ್ವಯಿಸುವಿಕೆಯನ್ನು ೫೦ಕ್ಕೆ ಇಳಿಸಲಾಗಿದೆ.
 
೨೦೦೨ ರಲ್ಲಿ ತನ್ನ ವರದಿ ಸಲ್ಲಿಸಿದ ಭಾರತದ ಎರಡನೇ ರಾಷ್ಟ್ರೀಯ ಕಾರ್ಮಿಕ ಆಯೋಗ ೨೦ ಮತ್ತು ಅದಕ್ಕಿಂತ ಹೆಚ್ಚಿನ ಉದ್ಯೋಗಿಗಳಿರುವ ಎಲ್ಲಾ ಕೈಗಾರಿಕಾ ಸಂಸ್ಥೆಗಳಲ್ಲಿ ಸ್ಥಾಯೀ ಆದೇಶಗಳ ಕಾಯಿದೆ ಜಾರಿಗೆ ಶಿಫಾರಸು ಮಾಡಿದೆ. ಸ್ಥಾಯೀ ಆದೇಶಗಳಲ್ಲಿ ಒಳಗೊಂಡಿರಬೇಕಾದ ವಿಷಯಗಳನ್ನು ಸಂಕುಚಿತಗೊಳಿಸಬೇಕಾದ ಯಾವುದೇ ಅವಶ್ಯಕತೆಯಿಲ್ಲ ಮತ್ತು ಉಭಯ ಪಕ್ಷಗಳ ನಡುವೆ ಸಹಮತ ಏರ್ಪಟ್ಟಲ್ಲಿ ಬಹು ಕೌಶಲ್ಯ, ಉತ್ಪಾದನೆ, ಗುಣಮಟ್ಟ, ಉದ್ಯೋಗ ಶ್ರೀಮಂತಿಗೆ, ಉತ್ಪಾದಕತೆ ಮುಂತಾದ ವಿಷಯಗಳನ್ನು ಕೂಡಾ ಸ್ಥಾಯೀ ಆದೇಶಗಳ ವ್ಯಾಪ್ತಿಯಲ್ಲಿ ಸೇರಿಸಬಹುದು ಎಂದು ಹೇಳಿದೆ. ಅಲ್ಲದೇ ೫೦ ಕ್ಕಿಂತಾ ಕಡಿಮೆ ಸಂಖ್ಯೆಯ ಉದ್ಯೋಗಿಗಳನ್ನು ಹೊಂದಿರುವ ಕೈಗಾರಿಕಾ ಸಂಸ್ಥೆಗಳಲ್ಲಿ ಪ್ರತ್ಯೇಕ ರೀತಿಯ ಸ್ಥಾಯೀ ಆದೇಶಗಳನ್ನು ರೂಪಿಸಬಹುದು ಎಂದು ಹೇಳಿರುವುದಲ್ಲದೇ ಒಂದು ಮಾದರಿ ಸ್ಥಾಯೀ ಆದೇಶಗಳ ಕರಡನ್ನು  ಕೂಡಾ ನೀಡಿದೆ.
 
ಕಳೆದ ಒಂದೆರಡು ವರ್ಷಗಳಿಂದ ನನ್ನ ಕೆಲವು ಉದ್ಯೋಗಿ ಮಿತ್ರರು ಈ ಕಾಯಿದೆ ಜಾರಿಗೆ ಬಂದು ಎಪ್ಪತ್ತಕ್ಕೂ ಹೆಚ್ಚಿನ ವರ್ಷಗಳಾಗಿದ್ದರೂ ಈ ಸ್ಥಾಯೀ ಆದೇಶಗಳು, ಅದಕ್ಕೆ  ಸಂಬಂಧಿಸಿದ ಕೇಂದ್ರೀಯ ನಿಯಮಗಳು, ಕಲ್ಲಿದ್ದಲ ಗಣಿಗಳು ಮತ್ತಿತರ ಸಂಸ್ಥೆಗಳಿಗೆ ಅನ್ವಯಿಸುವ ಮಾದರಿ ಸ್ಥಾಯೀ ಆದೇಶಗಳು, ಕರ್ನಾಟಕ ರಾಜ್ಯದ ನಿಯಮಗಳು, ಗುಮಾಸ್ತರಿಗೆ ಅನ್ವಯಿಸುವ ಮಾದರಿ ಸ್ಥಾಯೀ ಆದೇಶಗಳು ಜೀವನ ನಿರ್ವಹಣೆ ಭತ್ಯೆ ಕಾಯಿದೆ ಮತ್ತು ನಿಯಮಗಳುಮತ್ತು ಈ ಎಲ್ಲಾ ಕಾಯಿದೆ ಮತ್ತು ನಿಯಮಗಳಿಗೆ ಸಂಬಂಧಿಸಿದ ಇನ್ನಿತರ ಎಲ್ಲಾ ಮುಖ್ಯವಿಷಯಗಳಬಗ್ಗೆಇರುವನ್ಯಾಯಾಲಯಗಳ ಪ್ರಮುಖ ತೀರ್ಪುಗಳ ಬಗ್ಗೆ ಕನ್ನಡದಲ್ಲಿ ಪುಸ್ತಕವೇ ಇಲ್ಲ . ಹಾಗಾಗಿ ನೀವೇಕೆ ಅದನ್ನು  ಬರೆದು ಕರ್ನಾಟಕದ ಕೈಗಾರಿಕಾ ಸಂಸ್ಥೆಗಳಲ್ಲಿ ಉದ್ಯೋಗದಲ್ಲಿರುವ ಉದ್ಯೋಗಿಗಳಿಗೆ ಸಹಾಯ ಮಾಡಬಾರದು ಎಂದು ತಿಳಿಸಿದಾಗಲೇ ಈ ಪುಸ್ತಕದ ಅಥವಾ ವಿಷಯದ ಮಹತ್ವವನ್ನು ಆಳವಾಗಿ ಅಧ್ಯಯನಿಸುವ ಅವಕಾಶ ನನಗೆ ದೊರೆತಿದ್ದು. ಇದೇ ರೀತಿಯ ಸಂದರ್ಭ ವರ್ಷ ೨೦೦೨ ಕೂಡಾ ಬಂದಿತ್ತು. ೧೯೨೬ ರ ಕಾರ್ಮಿಕ ಸಂಘಗಳ ಕಾಯಿದೆಯ ಬಗ್ಗೆ ಕನ್ನಡದಲ್ಲಿ ಪುಸ್ತಕಗಳೇ ಇಲ್ಲದಿದ್ದಾಗ ಮಿತ್ರರ ಒತ್ತಾಸೆಯ ಮೇರೆಗೆ  ಆ ಪುಸ್ತಕ ಬರೆಯುವ ಅವಕಾಶ ನನಗೆ ಬಂತು ಮತ್ತು ಲಕ್ಷಾಂತರ ಮಂದಿ ಉದ್ಯೋಗಿಗಳಿಗೆ ಅದರಿಂದ ತುಂಬಾ ಪ್ರಯೋಜನವಾಯಿತು ಎಂಬ ಸಂತೃಪ್ತಿ ಈಗಲೂ ನಮಗಿದೆ.
 
ನಮ್ಮ ವೀನವೀ ಪ್ರಕಾಶನ ಸಂಸ್ಥೆಯ ಈ ಹಿಂದಿನ ಎಲ್ಲಾ ಪುಸ್ತಕಗಳು ಓದುಗರಿಗೆ ಬಹಳ ಉಪಯುಕ್ತವಾಗಿವೆ, ಹಾಗಾಗಿ ಓದುಗರು ಕೂಡಾ ಸಹೃದಯದಿಂದ ಅದನ್ನು ಪ್ರೋತ್ಸಾಹಿಸಿದ್ದಾರೆ.
 
ನಮ್ಮ ಈ ಪುಸ್ತಕದಿಂದ ಓದುಗರಿಗೆ ಯಾವುದೇ ಪ್ರಮಾಣದಲ್ಲಿ ಉಪಯೋಗವಾದರೇ , ಅವರಿಗೆ ಕಾನೂನಿನ ಬಗ್ಗೆ ಈಗಾಗಲೇ ಇರುವ ತಿಳುವಳಿಕೆಗೆ ಹೆಚ್ಚಿನ ಮೌಲ್ಯಗಳನ್ನು ಈ ಪುಸ್ತಕ ಒದಗಿಸಿದರೆ ಅದು ನಮ್ಮ ಸಂತೋಷ
 
ನಿಮ್ಮವ
ಎಂ ಆರ್ ನಟರಾಜ್ 

 

ಪುಸ್ತಕಕ್ಕಾಗಿ ಸಂಪರ್ಕಿಸಿ:

ನಿರುತ ಪಬ್ಲಿಕೇಷನ್ಸ್,

ದೂ: 080-23213710

Tags:

Leave comment for this ad